ಫಿರೋಜ್

 	ಬಹಮನೀ ರಾಜ್ಯದ 8ನೆಯ ಸುಲ್ತಾನ (1937-1422). ಒಂದನೆಯ ಅಲಾ ಉದ್ದೀನನ ಮೊಮ್ಮಗ ಹಾಗೂ 2ನೆಯ ಮಹಮ್ಮದ್‍ನ ಅಳಿಯ. 2ನೆಯ ಮಹಮ್ಮದ್‍ನ ಮರಣಾನಂತರ ಪ್ರಧಾನಿಯಾಗಿ ಬಾಲಕ ದಾವೂದನನ್ನು ಪಟ್ಟಕ್ಕೇರಿಸಿ ಅವನ ಮಂತ್ರಿಯಾಗಿದ್ದ ತಘಲ್ಚಿನ್‍ನನ್ನು ಕೊಂದು, ದಾವೂದನ ಕಣ್ಣು ಕಿತ್ತು, ತಾಜುದ್ದೀನ್ ಫಿರೋಜ್ ಷಾ ಎಂಬ ಹೆಸರಿನಿಂದ ಸಿಂಹಾಸನವೇರಿದ. (16-11-1397).

	ಫಿರೋಜನು ಅಧಿಕಾರಕ್ಕೆ ಬಂದಕೂಡಲೇ ತನ್ನ ಕಾರ್ಯಗಳಲ್ಲಿ ಸಹಕರಿಸಿದ್ದ ಸೋದರ ಅಹ್ಮದ್‍ನಿಗೆ ಖಾನ್-ಇ-ಖಾನಾನ್ ಪದವಿಯಿತ್ತು ಗೌರವಿಸಿದ. ತನ್ನ ಗುರು ಮೀರ್ ಫಸ್ಲುಲಾ ಇಂಜೂವನ್ನು ಪ್ರಧಾನಿಯಾಗಿ ನೇಮಕ ಮಾಡಿದ; ಸಾಗರ್‍ನಲ್ಲಿ ಉದ್ಭವಿಸಿದ ದಂಗೆಯನ್ನು ಅಡಗಿಸಿದ. 1398ರಲ್ಲಿ ವಿಜಯನಗರದ ಎರಡನೆಯ ಹರಿಹರ ಮತ್ತು ರಾಜಮಹೇಂದ್ರಿಯ ಕಾಟಯ್ಯವೇಮ ಇವರು ಏಕಕಾಲದಲ್ಲಿ ಬಹಮನೀ ರಾಜ್ಯವನ್ನು ಆಕ್ರಮಿಸಿದರು. ಆಗ ಫಿರೋಜ್ ಶತ್ರು ಸೈನ್ಯಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ. ಉತ್ತರದಲ್ಲಿ ಖೇರ್ಲದ ನರಸಿಂಗ ದಂಗೆ ಎದ್ದಾಗ ಅವನ ರಾಜ್ಯದ ಮೇಲೆ ದಂಡೆತ್ತಿ ಹೋಗಿ ಸದೆಬಡಿದ. 1406ರಲ್ಲಿ ಪುನಃ ವಿಜಯನಗರ ಸೈನ್ಯ ರಾಜ್ಯದ ಮೇಲೆ ದಾಳಿ ಮಾಡಿದಾಗ, ಫಿರೋಜ್ ಶತ್ರುಸೈನ್ಯವನ್ನು ಸೋಲಿಸಿ ದೇವರಾಯನಿಂದ ಬಂಕಾಪುರವನ್ನು ಪಡೆದುಕೊಂಡ. 1417ರಲ್ಲಿ ಫಿರೋಜನು ಒರಿಸ್ಸಾದವರೆಗೂ ದಂಡೆತ್ತಿಹೋಗಿ ನಾಲ್ಕನೆಯ ನರಸಿಂಹವನ್ನು ಸೋಲಿಸಿ ಕಪ್ಪ ವಸೂಲಿ ಮಾಡಿದ. ಈ ಮಧ್ಯೆ ದೇವರಾಯ ಪಾನಗಲ್ಲನ್ನು ಆಕ್ರಮಿಸಿಕೊಂಡ. ಅದನ್ನು ಫಿರೋಜನು ಬಿಡಿಸಿಕೊಳ್ಳಲು ಎರಡು ವರ್ಷಗಳ ಕಾಲ ಹೋರಾಡಬೇಕಾಯಿತು. ಈ ಯುದ್ಧಗಳಲ್ಲಿ ಇವನ ರಾಜ್ಯದ ಕೆಲವು ಭಾಗಗಳು ವಿಜಯನಗರಕ್ಕೆ ಸೇರಿಹೋದುವು. 

	ಕೊನೆಯ ಕಾಲದಲ್ಲಿ ಹೆಚ್ಚಿನ ಆಡಳಿತ ಹೊಣೆಯನ್ನು ಫಿರೋಜ್ ತನ್ನ ಮಗ ಹಸನ್‍ಖಾನ್‍ನಿಗೆ ವಹಿಸಿದ. ಆದರೆ ಫಿರೋಜನ ಸಹೋದರ ಅಹ್ಮದ್ 1422 ಸೆಪ್ಟೆಂಬರ್ 2ರಂದು ಫಿರೋಜನ ಸೈನ್ಯದ ಸಹಾಯದಿಂದ ಪದಚ್ಯುತಗೊಳಿಸಿದ. ಫಿರೋಜ್ ಅದೆ ವರ್ಷ ಅಕ್ಟೋಬರ್ 2ರಂದು ಮೃತನಾದ. ಅಹ್ಮದ್ ಮುಂದೆ ರಾಜಧಾನಿಯನ್ನು ಬಿದರೆಗೆ ಬದಲಾಯಿಸಿದ್ದರಿಂದ ಫಿರೋಜ್‍ನೇ ಗುಲ್ಬರ್ಗದಲ್ಲಿ ಆಳಿದ ಕೊನೆಯ ಬಹಮನೀ ಸುಲ್ತಾನ. 

	ಫಿರೋಜ್ ಭೀಮಾನದಿಯ ದಡದ ಮೇಲೆ ಫಿರೋಜ್‍ಬಾದ್ ಎಂಬ ಪಟ್ಟಣವನ್ನು ಕಟ್ಟಿಸಿದ. ಇವನು ಸ್ವತಃ ವಿದ್ವಾಂಸನಾಗಿದ್ದನಲ್ಲದೆ ಇರಾನಿನಿಂದ ಬಂದ ಅನೇಕ ವಿದ್ವಾಂಸರಿಗೆ ಆಶ್ರಯವಿತ್ತಿದ್ದ. ಖಗೋಳಶಾಸ್ತ್ರ ಅಧ್ಯಯನಕ್ಕೆ ಹೆಚ್ಚು ಪ್ರೋತ್ಸಾಹ ನೀಡಿ ದೌಲತಾಬಾದಿನ ಬಳಿ ಒಂದು ವೀಕ್ಷಣಾಲಯವನ್ನು ಕಟ್ಟಿಸಿದ. ಇವನ ಕಾಲದಲ್ಲಿ ಪಶ್ಚಿಮತೀರದ ಚೌಲ್ ಮತ್ತು ದಾಬೋಲ್ ಬಂದರುಗಳು ಅಭಿವೃದ್ಧಿಗೊಂಡವು. ಫಿರೋಜ್ ಅಧಿಕಾರಕ್ಕೆ ಬಂದಾಗ ಉಪಕಾರಿಯೂ ಸಹನಶೀಲನೂ ಜನಪ್ರಿಯನೂ ಆಗಿದ್ದನೆಂದು ತಿಳಿದುಬರುತ್ತದೆ. ಇವನನ್ನು ಬಹುಮನೀ ರಾಜರಲ್ಲೇ ಶ್ರೇಷ್ಟನೆಂದೂ ಫೆರಿಸ್ತ ಹೇಳಿದ್ದಾನೆ.					*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ